ಶರನ್ನವರಾತ್ರಿ ಮಹೋತ್ಸವ – 2024
Booking

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಗ್ಗೆ ಕೇಳದ ಜನರಿಲ್ಲ, ಇದು ಮನೆ ಮಾತಾಗಿರುವ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ನೆಲಸಿರುವ ಮಹಾಲಕ್ಷ್ಮಿಯು ಕಾಮಿತ ಫಲವೀವ ಕಾಮಧೇನುವಾಗಿದ್ದಾಳೆ, ನೊಂದು ಬೆಂದ ಭಕ್ತರ ನೋವು ನೀಗುವ ಅಮೃತ ಮಹಿಯಾಗಿದ್ದಾಳೆ. ಬಯಕೆಗಳನ್ನು ಕೈಗೂಡಿಸುವ ಕಲ್ಪವೃಕ್ಷವಾಗಿದ್ದಾಳೆ. ಹಸಿದ ಒಡಲಿಗೆ ಅನ್ನ ನೀಡುವ ಅನ್ನಪೂರ್ಣೆಯಾಗಿದ್ದಾಳೆ. ಗೊರವನಹಳ್ಳಿ ಕ್ಷೇತ್ರವು ಭಕ್ತಿಯ ಬೀಡಾಗಿದೆ.

ಸುಮಾರು 30 ವರ್ಷಗಳ ಹಿಂದೆ ಗೊರವನಹಳ್ಳಿಯು ಸಾಮಾನ್ಯ ಹಳ್ಳಿಯಾಗಿತ್ತು, ತೋಟದಪ್ಪ ಸೃಷ್ಠಿಸಿದ ಲಕ್ಷ್ಮಿದೇವಿಯ ಪೂಜೆ ಸಾಮಾನ್ಯವಾಗಿ ನಡೆಯುತ್ತಿತ್ತು, ಜನರು ವಾರಕ್ಕೊಮ್ಮೆ ಇಲ್ಲಿಗೆ ಬರುತ್ತಿದ್ದರು. ಆಗ ಗೊರವನಹಳ್ಳಿಗೆ ಸೊಸೆಯಾಗಿ ಬಂದ ಹೆಣ್ಣು ಮಗಳೊಬ್ಬಳು ಲಕ್ಷ್ಮಿಯ ಕೃಪೆಗೆ ಪಾತ್ರಳಾದಳು. ತ್ರಿಕರಣ ಶುದ್ದಿಯಿಂದ ನಿರಂತರವಾಗಿ ದೇವರ ಸೇವೆಯನ್ನು ಮಾಡಿ, ಈ ಮಹಿಳೆಯ ತ್ಯಾಗ ಮತ್ತು ಸೇವಾ ಮನೊಭಾವದಿಂದ ಗೊರವನಹಳ್ಳಿ ಸುಕ್ಷೇತ್ರವಾಯಿತು. ಈ ಮಹಿಳೆಯು ದೇವತೆ ಎನಿಸಿದಳು, ಹೀಗೆ ಬದುಕನ್ನು ಸಾರ್ಥಕ ಪಡಿಸಿಕೊಂಡು ಮಹಾಲಕ್ಷ್ಮಿ ದೇವಾಲಯವನ್ನು ನಾಡಿನ ಮೂಲೆ ಮೂಲೆಗೆ ಪರಿಚಯಿಸಿದ ಮಾತೆಯೇ ಶ್ರೀಮತಿ ಕಮಲಮ್ಮನವರು.

ಹಿಂದೆ ಗೊರವನಹಳ್ಳಿಗೆ ಭೇಟಿ ನೀಡಿದ್ದ ಭಕ್ತಾಧಿಗಳು ಇಂದು ಭೇಟಿ ನೀಡಿದರೆ ಬೆರಗಾಗುವಷ್ಟು ಗೊರವನಹಳ್ಳಿ ಕ್ಷೇತ್ರ ಬೆಳೆದಿದೆ. ಮಹಾಲಕ್ಷ್ಮಿ ದೇವಾಲಯ ಇಂದು ಭವ್ಯವಾದ ರೀತಿಯಲ್ಲಿ ಅಭಿವೃದ್ಧಿಗೊಂಡಿದೆ. ದೇವಾಲಯದ ಆವರಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹಾಲಿ ಇದ್ದ ದೇವಾಲಯವನ್ನು ಭವ್ಯವನ್ನಾಗಿಸಲು 60 ಲಕ್ಷ ರೂ. ವೆಚ್ಚ ಮಾಡಲಾಗಿದೆ. 1 ಕೋಟಿ ರೂ ವೆಚ್ಚ ಮಾಡಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಯಾತ್ರೀನಿವಾಸ ನಿರ್ಮಾಣ ಮಾಡಲಾಗಿದೆ. ಸ್ನಾನ ಗೃಹಗಳು, ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಬಯಲು ರಂಗಮಂದಿರ ನಿರ್ಮಾಣವಾಗಿದೆ. ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೂ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾಲಕ್ಷ್ಮಿ ದೇವಾಲಯದಲ್ಲಿ ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬ & ಕಾರ್ತಿಕ ಮಾಸದಲ್ಲಿ ವೈಭವಯುತವಾಗಿ ಲಕ್ಷದೀಪೋತ್ಸವ, ಬೆಳ್ಳಿ ರಥೋತ್ಸವವನ್ನು ನಡೆಸಲಾಗುತ್ತಿದೆ. ಅಲ್ಲದೆ ಸಾಮಾಜಿಕ ಸೇವಾ ಕಾರ್ಯಗಳನ್ನು ಟ್ರಸ್ಟ್ ಇತ್ತೀಚೆಗೆ ಕೈಗೆತ್ತಿಕೊಂಡಿದೆ. ಪ್ರತಿ ವರ್ಷ ಸುಮಾರು 1200 ರಿಂದ 1500 ಜೋಡಿಗಳ ಉಚಿತ ವಿವಾಹ ಕಾರ್ಯಗಳನ್ನು ನಡೆಸುತ್ತಿರುತ್ತದೆ. ಅಲ್ಲದೆ ಎಲ್ಲಾ ಪ್ರೌಢಶಾಲೆ/ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ಮಾಡಲಾಗುತ್ತಿದೆ. ಪ್ರತಿ ವರ್ಷ ಸುಮಾರು 5 ಲಕ್ಷ ವೆಚ್ಚ ಮಾಡಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ.

ಟ್ರಸ್ಟ್ ವತಿಯಿಂದ ಈ ಭಾಗದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಾಲಕ್ಷ್ಮಿ ವಿದ್ಯಾ ಮಂದಿರವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ 300 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿರುತ್ತಾರೆ. ಇವರಿಗೆ ಉಚಿತವಾಗಿ ಪಠ್ಯ ಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ. 2009ನೇ ಸಾಲಿನಿಂದ ಶ್ರೀ ಮಹಾಲಕ್ಷ್ಮೀ ಪಾಲಿಟೆಕ್ನಿಕ್ ಪ್ರಾರಂಭಿಸಲಾಗಿದ್ದು, ಇದರಲ್ಲಿ 450 ಜನ ವಿದ್ಯಾರ್ಥಿಗಳು ನೊಂದಣಿಯಾಗಿದ್ದಾರೆ. ಈ ಕಾಲೇಜಿಗೆ ನುರಿತ ಉಪನ್ಯಾಸಕರು, ಗ್ರಂಥಾಲಯ, ಲ್ಯಾಬೋರೇಟರಿ, ಪಾಠೋಪಕರಣ, ಪೀಠೋಪಕರಣ ಎಲ್ಲಾ ಸವಲತ್ತುಗಳನ್ನೊಳಗೊಂಡಿರುವ ಸುಸಜ್ಜಿತ ಕಾಲೇಜು ಆಗಿರುತ್ತದೆ.

ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಬಿ.ಜಿ.ವಾಸುದೇವ, ಕಾರ್ಯದರ್ಶಿ ಶ್ರೀಮತಿ ಕಮಲಮ್ಮ ಹಾಗೂ ಎಲ್ಲಾ ಧರ್ಮದರ್ಶಿಗಳಿಗೂ ಮಹಾಲಕ್ಷ್ಮಿ ದೇವಾಲಯದ ಪರಿಸರವನ್ನು ಇನ್ನೂ ಅದ್ಭುತವಾಗಿ ಅಭಿವೃದ್ಧಿ ಮಾಡುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ರೂಪಿಸಕೊಂಡಿರುತ್ತಾರೆ. ನಾಡಿನ ಅತ್ಯಂತ ಹೆಸರಾಂತ ಧಾರ್ಮಿಕ ಪ್ರವಾಸಿ ಸ್ಥಳವನ್ನಾಗಿ ಮಾಡುವ ಹಂಬಲವಿದೆ.